ಜೀ ವಾಹಿನಿಯಲ್ಲಿ ಭಕ್ತಿ ಪ್ರಧಾನ ನಾಗಿಣಿ
Posted date: 03 Wed, Feb 2016 – 04:41:39 PM

ಹಲವಾರು ವಿಭಿನ್ನ ಶೈಲಿಯ ಧಾರಾವಾಹಿಗಳನ್ನು ಕನ್ನಡ ಕಿರುತೆರೆ ವೀಕ್ಷಕರಿಗೆ ನೀಡುತ್ತಿರುವ ಜೀ ಕನ್ನಡ ವಾಹಿನಿ ಇದೇ ಫೆಬ್ರವರಿ ೮ರಿಂದ ಪ್ರತಿ ಸೋಮವಾರರಿಂದ-ಶುಕ್ರವಾರದವರೆಗೆ ರಾತ್ರಿ ೯:೦೦ ಗಂಟೆಗೆ ಮತ್ತೊಂದು ಭಕ್ತಿಪ್ರಧಾನ ಧಾರಾವಾಹಿಯನ್ನು ಆರಂಭಿಸುತ್ತಿದೆ.  ಮನುಷ್ಯನ ನಾಗಮಣಿಯ ದುರಾಸೆಯಿಂದ ತನ್ನವರನ್ನೆಲ್ಲಾ ಕಳೆದುಕೊಳ್ಳುವ ನಾಗಿಣಿ ತನ್ನವರನ್ನು ಸಾಯಿಸಿದವರ ಮೇಲೆ ಸೇಡು ತೀರಿಸಿಕೊಳ್ಳುವ ಛಲದಿಂದ ಭೂಮಿಗೆ ಬರುತ್ತಾಳೆ. ಭೂಮಿಗೆ ಬಂದ ನಂತರ ಆ ನಾಗಿಣಿ ಅನುಭವಿಸುವ ಸಂದರ್ಭ ಹಾಗೂ ಸನ್ನಿವೇಶಗಳನ್ನು ನಿರ್ದೇಶಕರಾದ ಹಯವದನ ಅವರು ತುಂಬಾ ರೋಚಕವಾಗಿ ನಿರೂಪಿಸುತ್ತಿದ್ದಾರೆ. ಮನುಷ್ಯನಲ್ಲಿರುವ ದುರಾಸೆ, ಅಹಂಕಾರ, ದೈವತ್ವದ ಬಗ್ಗೆ ಆತನಲ್ಲಿರುವ ನಿರ್ಲಕ್ಷೆ, ಅದರಿಂದ ಆತ ಅನುಭವಿಸುವ ತೊಂದರೆಗಳನ್ನು ಹೇಳುವ ಪ್ರಯತ್ನ  ಈ ಧಾರಾವಾಹಿಯಲ್ಲಿ ನಡೆದಿದೆ. ಒಂದು ಕಾಲ್ಪನಿಕ ಕಥೆಗೆ ಈಗಿನ ಕಾಲಘಟ್ಟದ ದೃಶ್ಯಗಳನ್ನು ಅಳವಡಿಸಿ ಮನರಂಜನೆಯ ದೃಷ್ಟಿಯಿಂದ ಕಥೆಯನ್ನು ಹೇಳುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಈ ಧಾರಾವಾಹಿಯಲ್ಲಿ ಗ್ರಾಫಿಕ್ಸ್ ಕೂಡ ಒಂದು ಪಾತ್ರವಾಗಿ ಮೂಡಿಬಂದಿದೆ. ಪ್ರತಿ ಸಂಚಿಕೆಯೂ ವಿಶೇಷತೆಯಿಂದ ಕೂಡಿದ್ದು, ವೀಕ್ಷಕರನ್ನು ಹಿಡಿದಿಡಲಿದೆ ಎಂದು ಜೀ ವಾಹಿನಿಯ ರಾಘವೇಂದ್ರ ಹುಣಸೂರು ಹೇಳಿದ್ದಾರೆ.

ಶುಭಮಂಗಳ, ಅಗ್ನಿಸಾಕ್ಷಿ, ಮಧುಬಾಲದಂತಹ ಯಶಸ್ವಿ ಧಾರಾವಾಹಿಗಳನ್ನು ನಿರ್ದೇಶಿಸಿದ್ದ ಹಯವದನ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.  ಎಂ.ವಿ. ಹರೀಶ್‌ಬಾಬು ಮತ್ತು ಸಿಂಧು ನಿರ್ಮಿಸುತ್ತಿರುವ ಈ ಧಾರಾವಾಹಿಗೆ ನವಿಲು ಗರಿ ಸೋಮು ಚಿತ್ರಕಥೆ ಮತ್ತು ಸಾಹಿತ್ಯ ರಚಿಸಿದ್ದಾರೆ. ನಟರಾಜ್ ಮುದ್ದಲ ಛಾಯಾಗ್ರಹಣ, ಅನಿ ಅನಿಲ್ ಸಂಕಲನ, ರವಿಶಂಕರ್ ಮಿರ್ಲೆ ಸಂಭಾಷಣೆ, ವಿಜಯಕೃಷ್ಣ ಮೈಸೂರು ಸಂಗೀತ, ಜನಾರ್ಧನ ಪೂಜಾರಿ ಕಲಾ ನಿರ್ದೇಶನವಿದೆ. ದೀಕ್ಷಿತ್, ದೀಪಕ್‌ದಾಸ್, ಆಶಾಲತಾ, ಸಂಜಯ್ ಜಯಶ್ರೀರಾಜ್, ರಘು ಮಂಡ್ಯ, ಅರ್ಜುನ್ ಇನ್ನೂ ಮೊದಲಾದ ತಾರಾಬಳಗವಿದೆ.
ರಂಗನ್ ಲವ್ ಸ್ಟೋರಿ ಇದೇ ತಿಂಗಳಿಂದ ಪ್ರಾರಂಭ

ಈಗಾಗಲೇ ಕೈತುತ್ತು ೭೪೧೧೧೯೦೪೨೯ ನಂಥ ವಿಶಿಷ್ಟ ಚಿತ್ರಗಳನ್ನು ನಿದೇಶಿಸಿರುವ ರಾಜೀವ್ ಕೃಷ್ಣ ಗಾಂಧಿ ಮುಂದಿನ ತಿಂಗಳು ಮತ್ತೊಂದು ಚಿತ್ರವನ್ನು ಆರಂಭಿಸುತ್ತಿದ್ದಾರೆ. ಈ ಬಾರಿ ಅವರು ಕ್ರೈಂ ಹಿನ್ನೆಲೆಯ ಕಥಾನಕವೊಂದನ್ನು ಆಯ್ಕೆ ಮಾಡಿಕೊಂಡಿದ್ದು, ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ರಾಜೀವ್ ಕೃಷ್ಣ ಗಾಂಧಿ ಅವರೇ ವಹಿಸಿಕೊಂಡಿದ್ದಾರೆ. ಕಿರುತೆರೆಗಳಲ್ಲಿ ಪ್ರಸಾರವಾಗುತ್ತಿರುವ ವಾರೆಂಟ್, ಕ್ರೈಂ ಸ್ಟೋರಿ ಥರದ ಒಂದು ಎಳೆಯನ್ನು ಹೊಂದಿರುವ ಈ ಚಿತ್ರದ ಹೆಸರು ರಂಗನ್ ಲವ್ ಸ್ಟೋರಿ.  ಈ ಚಿತ್ರದ ಮೂಲಕ ಕಿರಣ್‌ರಾಜ್ ಎಂಬ ಹೊಸ ಪ್ರತಿಭೆ ಸ್ಯಾಂಡಲ್‌ವುಡ್‌ಗೆ ಪರಿಚಿತವಾಗುತ್ತಿದ್ದಾರೆ. ರಂಭಾರೂಟಿ ಎಂಬ ತುಳು ಚಿತ್ರದಲ್ಲಿ ಅಭಿನಯಿಸಿದ ಶೃತಿಲಯ ರಂಗನ್ ಲವ್ ಸ್ಟೋರಿನಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.  ಕ್ರೈಂ ಹಿನ್ನೆಲೆಯಲ್ಲಿರುವ ಪಕ್ಕಾ ಲವ್ ಸ್ಟೋರಿ ಇದಾಗಿದ್ದು, ಪಕ್ವತೆ ಇಲ್ಲದ ಹದಿಹರೆಯದಲ್ಲಿ ಪ್ರೀತಿ, ಪ್ರೇಮದ ಹಿಂದೆ ಯುವಕ-ಯುವತಿಯರು ಹೋದರೆ ಏನೇನಾಗುತ್ತದೆ. ಅದರಿಂದ ಪೋಷಕರಾದವರು ಏನೆಲ್ಲಾ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ಈ ಚಿತ್ರದ ಮೂಲಕ ಹೇಳುವ ಪ್ರಯತ್ನವನ್ನು ನಿರ್ದೇಶಕ ರಾಜೀವ್ ಕೃಷ್ಣ ಅವರು ಮಾಡುತ್ತಿದ್ದಾರೆ. ಚಿತ್ರದುರ್ಗ, ಚಿಕ್ಕಬಳ್ಳಾಪುರ ಹಾಗೂ ಚಿಂತಾಮಣಿ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಯಲಿದ್ದು, ಫೆಬ್ರವರಿ ಕೊನೇ ವಾರ ಚಿತ್ರದ ಮುಹೂರ್ತ ನಡೆಯಲಿದೆ.

ಅಮೃತ ಚಿತ್ರಸಂಸ್ಥೆಯಲ್ಲಿ ಶ್ರೀಮತಿ ಬಿ.ಆರ್. ಭಾಗ್ಯ ರಂಗನಾಥ ನಿರ್ಮಿಸುತ್ತಿರುವ ಚಿತ್ರಕ್ಕೆ ಪ್ರಮೋದ್ ಆರ್., ಛಾಯಾಗ್ರಹಣ, ವಿನೋದ್ ಸಂಗೀತ, ಆರ್.ಡಿ. ರವಿ ಸಂಕಲನ, ಎಸ್.ಎಸ್.ಕೆ. ಸಂದೀಪ್ ನೃತ್ಯ ನಿರ್ದೇಶನ, ನಿಟ್ಟೂರಹಳ್ಳಿ ಮುನಿರಾಜ್ ಸಹನಿರ್ದೇಶನವಿದೆ. ಕಿರಣ್‌ರಾಜ್, ಶೃತಿ ಲಯ, ಭಾಗ್ಯಶ್ರೀ, ನಾರಾಯಣಸ್ವಾಮಿ, ವೆಂಕಿ, ಕಿಲ್ಲರ್ ವೆಂಕಟೇಶ್, ಜ್ಯೋತಿ ಮರೂರು, ಬ್ಯಾಂಕ್ ಜನಾರ್ಧನ್ ತಾರಾಬಳಗದಲ್ಲಿದ್ದಾರೆ.



Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed